ವೈಮಾನಿಕ ಶಾಸ್ತ್ರ

Science and Technology Jul 08, 2021

28 ಜೂನ್ 1951 ರಂದು ಮೈಸೂರಿನಲ್ಲಿ ಮಹಾರಾಜ ಜಯಚಾಮರಾಜೇಂದ್ರ  ಒಡೆಯರು ಅಂತರಾಷ್ಟ್ರೀಯ ಸಂಸ್ಕೃತ ಸಂಶೋಧನಾ ಸಂಸ್ಥೆಯ ಉಧ್ಘಾಟನೆಯನ್ನು ರಾಜ್ಯದ ಅಂದಿನ ಮುಖ್ಯಮಂತ್ರಿ ಕೆ. ಸಿ. ರೆಡ್ಡಿಯವರ ಸಮ್ಮುಖದಲ್ಲಿ ನೆರವೇರಿಸಿದರು. ಶ್ರೀಮಾನ್ ಜಿ. ಆರ್. ಜೋಸಿಯರ್ ಈ ಸಂಸ್ಥೆಯ ನಿರ್ವಾಹಕರು. ಈ ಸಮಾರಂಭದಲ್ಲಿ ಆ ಸಂಸ್ಥೆಯು ಸುಮಾರು ವರ್ಷಗಳಿಂದ ಕಷ್ಟಪಟ್ಟು ಸಂಗ್ರಹಿಸಿದ ಎಲ್ಲಾ ಸಂಸ್ಕೃತ ಗ್ರಂಥಗಳನ್ನು ಅತಿಥಿಗಳ ಪ್ರದರ್ಶನಕ್ಕಿಡಲಾಗಿತ್ತು. ಬೆಂಗಳೂರಿನಿಂದ ಬಂದ ಅತಿಥಿಯೊಬ್ಬರು ತಂದಿದ್ದ  ಸಂಸ್ಕೃತದ ಕೈ ಬರಹದ ಒಂದು ಪುಸ್ತಕ ಮತ್ತು ಅದರಲ್ಲಿದ್ದ ಮಾಹಿತಿ ಮಹಾರಾಜರನ್ನು ಮತ್ತು ಅಲ್ಲಿ ನೆರೆದಿದ್ದ ಗಣ್ಯರನ್ನು ಚಕಿತಗೊಳಿಸುತ್ತದೆ. ಇದು ಅವರ ಸಂಗ್ರಹಿಸಿದ ಮೊದಲನೇ ಪುಸ್ತಕವಂತೆ, ಇನ್ನೂ 22 ಇಂತಹ ಅಭ್ಯಾಸ ಪುಸ್ತಕಗಳಲ್ಲಿ ಸಂಪೂರ್ಣ ಮಾಹಿತಿ ಇದೆ ಎಂದಾಗ ಎಲ್ಲರೂ ಆಶ್ಚರ್ಯಪಡುತ್ತಾರೆ.

ಏನಿತ್ತು ಅಂತಹ ವಿಶೇಷತೆ....ಕೈ ಬರಹದಲ್ಲೇ ಬರೆದಿದ್ದ ಈ ಪುಸ್ತಕದ ಮೊದಲ ಪುಟದಲ್ಲಿತ್ತು ಪುಸ್ತಕದ ತಲೆಬರಹ...

" ಮಹರ್ಷಿ ಭಾರಧ್ವಜ ವಿರಚಿತ ವೈಮಾನಿಕ ಶಾಸ್ತ್ರ"

ಆದರೆ ಕೈ ಬರಹ ಯಾರದು?
ಇದು ವೆಂಕಟಾಚಲ ಶಾಸ್ತ್ರಿ ಎನ್ನುವವರ ಕೈ ಬರಹ. ಸರಿ ಇದನ್ನು ಅವರಿಂದ ಬರೆಯಿಸಿದವರು ಯಾರು? ಅವರು ಆನೇಕಲ್ಲಿನ ಸುಬ್ಬರಾಯ ಶಾಸ್ತ್ರಿಗಳಂತೆ. ಅಲ್ಲಿ ನಮೂದಿಸಿರುವ ದಿನಾಂಕ 9 ಸೆಪ್ಟೆಂಬರ್ 1919. ಅವರಿಗೆ ಮಹರ್ಷಿ ಭಾರಧ್ವಜ ನಿರ್ಮಿತ ಗ್ರಂಥ ಎಲ್ಲಿಂದ ಸಿಕ್ಕಿತು? ಆಶ್ಚರ್ಯವೆಂದರೆ ಇದು ಯಾವ ಗ್ರಂಥದ ಆಧಾರಿತ ಕೃತಿಯಲ್ಲ  ಇಂಥಹದ್ದೊಂದು ಕೃತಿಯ ಬಗ್ಗೆ ಯಾರೂ ಅಲ್ಲಿಯವರೆಗೂ ಕೇಳಿಯೂ ಇರಲಿಲ್ಲ.

ಕುತೂಹಲ ಕೆರಳಿಸಿದ ಈ ಪುಸ್ತಕದ ಬಗ್ಗೆ ಕೆಲವರು ಸಂಶೋಧನೆ ನಡೆಸಿದಾಗ ತಿಳಿದು ಬಂದ ವಿಷಯ ಹೀಗಿದೆ…..ಇದು ಮಹರ್ಷಿ ಭಾರಧ್ವಜರಿಂದ ಸುಬ್ಬರಾಯ ಶಾಸ್ತ್ರಿಗಳಿಗೆ ಮನೋಪ್ರವಾಹದಿಂದ, ಮನೋಸರಿತದಿಂದ
( psychic  channelling) ಪ್ರಾಪ್ತವಾದ "ಯಂತ್ರ ಸರ್ವಸ್ವ" ಎನ್ನುವ ಬೃಹತ್ ಗ್ರಂಥದ ಒಂದು ಭಾಗ 'ವೈಮಾನಿಕ ಶಾಸ್ತ್ರ'.

ಮೊದಲು ಈ ಮನೋಪ್ರವಾಹದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು, ಅದಕ್ಕೂ ಮೊದಲು ಯಾರು ಈ ಸುಬ್ಬರಾಯ ಶಾಸ್ತ್ರೀಯವರು, ಏನು ಅವರ ಹಿನ್ನಲೆ?

ಸುಬ್ಬಾರಾಯಶಾಸ್ತ್ರಿ ಹೊಸೂರು ತಾಲೂಕಿನ ತೊಗರೆ ಅಗ್ರಹಾರದ ನಿವಾಸಿ. ಇವರದ್ದು ಒಂದು ಬಡತನದ ಕುಟುಂಬ. ಇಡೀ ಕುಟುಂಬ ಸಿಡಿಬು ರೋಗಕ್ಕೆ ತುತ್ತಾಗಿಬಿಡುತ್ತದೆ. ಅವರಿದ್ದ ಹಳ್ಳಿ ಯಲ್ಲಿಯೂ ಅನೇಕ ಸಾವು ನೋವುಗಳು ಸಂಭವಿಸುತ್ತವೆ. ಸುಬ್ಬರಾಯ ಶಾಸ್ತ್ರಿಗಳೂ ಸಹಾ ಸಾವಿನೊಂದಿಗೆ ಹೋರಾಡಿ ಅಂತೂ ಬದುಕುಳಿಯುತ್ತಾರೆ. ಮುಂದೆ ಕೋಲಾರ ಜಿಲ್ಲೆಯ ಅವನಿ ಕಾಡನ್ನು ತಲುಪಿ ಹಲವು ವರ್ಷಗಳ ಕಾಲ ಅಲ್ಲಿಯ ಕಾಡಿನಲ್ಲಿ ಏಕಾಂಗಿಯಾಗಿ ಜೀವನ ಸಾಗಿಸುತ್ತಾರೆ. ಇಲ್ಲಿನ ಗುಹೆಯೊಂದರಲ್ಲಿದ್ದ  ಋಷಿಯೊಬ್ಬರ ಪರಿಚಯವಾಗುತ್ತದೆ. ಆ ಋಷಿಗಳಿಂದ ವಿದ್ಯಾದಾನ ಪಡೆದ ಶಾಸ್ತ್ರಿಗಳಿಗೆ  ಸುಮಾರು ಒಂಭತ್ತು ವರ್ಷಗಳ ಕಾಡಿನ ಜೀವನ ಅವರಲ್ಲಿ ಕೆಲ ಮಹತ್ತರ ಬದಲಾವಣೆಗಳಿಗೆ ಅನುವು ಮಾಡಿ ಕೊಡುತ್ತದೆ. ಆ ಸನ್ಯಾಸಿಗಳಿಂದ ಸಂಸ್ಕೃತ ವಿದ್ಯಾಪ್ರದಾನವಾಗುತ್ತದೆ. ಸುಧೀರ್ಘಧ್ಯಾನ, ಸಮಾಧಿಯ ಸ್ಥಿತಿಯನ್ನು ತಲುಪಿ ಮಹರ್ಷಿ ಭಾರಾಧ್ವಜ, ಗೌತಮ ಮತ್ತು ನಾರದರ ಜೊತೆ "ಮನೋಸರಿತ"ದ ಮೂಲಕ ಸಂಪರ್ಕವೇರ್ಪಡುತ್ತದಂತೆ. ಅಲ್ಲಿಂದ ನಿರಂತರವಾಗಿ ಹರಿದು ಬರುತ್ತದೆ ಜ್ಞಾನದ ಮಹಾಪೂರ.

‘ವಿಮಾನ ಶಾಸ್ತ್ರ’ ‘ಭೌತಿಕ ಕಲಾನಿಧಿ’ ‘ಜಲತಂತ್ರ’ ಇತ್ಯಾದಿ ಬೃಹತ್ ಕೃತಿಗಳ ಸೃಷ್ಟಿಗೆ ಆಧಾರವಾಗುವ ಜ್ಞಾನ ಪ್ರಾಪ್ತವಾಗುತ್ತದೆ. ಸಾವಿರಾರು ಸಂಸ್ಕೃತ ಶ್ಲೋಕಗಳನ್ನು ಮನನ ಮಾಡಿಕೊಳ್ಳುತ್ತಾರೆ. ಆದರೆ ಇವರಿಗೆ ಸಂಸ್ಕೃತ ಭಾಷೆಯನ್ನು ಓದಲು ಬರೆಯಲು ಬರುತ್ತಿರಲಿಲ್ಲ ಏಕೆಂದರೆ ಇವರು ಕಲಿತಿದ್ದೆಲ್ಲಾ ಮೌಖಿಕವಾಗಿ, ಹಾಗಾಗಿ ಇವನ್ನೆಲ್ಲಾ ಬರೆಯಲು ಯಾರಾದರೂ ಸಹಾಯ ಮಾಡಬೇಕಾಗುತ್ತದೆ.

ಮುಂದೆ ಕಾಡಿನಿಂದ ಹೊರಗೆ ಬಂದನಂತರ ೨೫ ವರ್ಷಗಳ ಕಾಲ ಆನೇಕಲ್ಲಿನಲ್ಲಿ ನೆಲೆಸುತ್ತಾರೆ. ಆನೆಕಲ್ಲಿನಲ್ಲಿರುವಾಗ ಆಗ್ಗಾಗ್ಗೆ  ಅನುಭಾವಕ್ಕೆ ಒಳಗಾಗುತ್ತಿದ್ದ ಶಾಸ್ತ್ರಿಗಳು ವೈಮಾನಿಕ ಶಾಸ್ತ್ರಕ್ಕೆ ಸಂಬಂಧಿಸಿದ ಸಂಸ್ಕೃತದಲ್ಲಿ ಶ್ಲೋಕಗಳನ್ನು ಪಠಿಸುತ್ತಿದ್ದರಂತೆ, ಅವುಗಳನ್ನು ಅವರ ಆಪ್ತರಾದ  ವೆಂಕಟಾಚಲ ಶರ್ಮ ಎನ್ನುವವರು ಬರೆದುಕೊಳ್ಳುತ್ತಿದ್ದರು. ಹೀಗೆ ಕೇಳಿಸಿಕೊಂಡು ಬರೆದದ್ದೇ ಸುಮಾರು ಆರು ಸಾವಿರ ಸಾಲುಗಳನ್ನು 23 ಕಡತಗಳಲ್ಲಿ ದಾಖಲಿಸುತ್ತಾರೆ. ಇದರಲ್ಲಿ ದಾಖಲಿಸಿರುವ ದಿನಾಂಕ 1/8/1918 ನಿಂದ ಪ್ರಾರಂಭವಾಗಿದ್ದು ಕೊನೆಯ ಕಡತದಲ್ಲಿ 23/8/1923 ಎಂದಿದೆ.

ಮೂರು ಸಾವಿರದಷ್ಟು ಸಂಸ್ಕೃತ ಶ್ಲೋಕಗಳನ್ನು ಎಂಟು ಅಧ್ಯಾಯಗಳಾಗಿ ವಿಂಗಡಿಸಿದ್ದು ಇದಕ್ಕೆ "ಮಹರ್ಷಿ ಭಾರಾಧ್ವಜ ವಿರಚಿತ ವೈಮಾನಿಕ ಶಾಸ್ತ್ರ" ಎಂದು ತಲೆಬರಹ ಕೊಡಲಾಗುತ್ತದೆ. ಟಿ. ಕೆ. ಎಲ್ಲಪ್ಪ ಎನ್ನುವ ಕರಡು ತಯಾರಕರಿಂದ ಇವರು ವಿವರಿಸಿದ ಹಾಗೆ ವಿಮಾನಗಳ ವಿವಿಧ ಭಾಗಗಳ ನಕ್ಷೆಗಳನ್ನು ಬಿಡಿಸಲಾಗುತ್ತದೆ. ಈ ಗ್ರಂಥ ಮುದ್ರಣಕ್ಕೆ ಸಹಾಯಕೋರಿ ಹಲವಾರು ಗಣ್ಯರಿಗೆ, ಶ್ರೀಮಂತರಿಗೆ ಪತ್ರ ಬರೆಯುತ್ತಾರೆ. ಬಿಹಾರದ ದರ್ಬಂಗಾದ ರಾಜರಿಗೂ ಪತ್ರ ಬರೆದ ದಾಖಲೆಗಳಿವೆ.

ಆನೇಕಲ್ಲಿನಲ್ಲಿ ನಡೆಯುತ್ತಿದ್ದ ಈ ವಹಿವಾಟುಗಳು ಬ್ರಿಟಿಷರ ಗಮನಕ್ಕೆ ಬಂದು ಸುಬ್ಬರಾಯ ಶಾಸ್ತ್ರಿಗಳನ್ನು ಬಂಧಿಸಿ ಸೆರೆಮನೆಗೆ ತಳ್ಳಿಬಿಡುತ್ತಾರೆ ಕ್ರೂರಿ ಆಂಗ್ಲರು. ಕೆಲವು ತಿಂಗಳುಗಳಲ್ಲಿ ಅನಾರೋಗ್ಯದಿಂದಾಗಿ ಶಾಸ್ತ್ರಿಗಳು ಸಾವನ್ನಪ್ಪುತ್ತಾರೆ. ಅಲ್ಲಿಗೆ ಮುಗಿಯಿತು ಒಬ್ಬ ಅದ್ಭುತ ಪಂಡಿತನ, ಸಂಶೋಧಕನ ಜೀವನಗಾಥೆ.

ವೆಂಕಟಾಚಲ ಶರ್ಮಾರವರು ತಮ್ಮ ಗುರುವಿನ ಗ್ರಂಥವನ್ನು ರಹಸ್ಯವಾಗಿ ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ.
ಇದರಲ್ಲಿ ಮೊದಲನೆಯ ಕಡತವನ್ನು 21/8/1951 ರಂದು ಮೈಸೂರಿನ ಮಹಾರಾಜರಿಗೆ ತೋರಿಸುತ್ತಾರೆ. ಮುಂದೆ ಜೋಸೆಯರ್ ಅವರ ಅನುಮತಿ ಪಡೆದು ಇದನ್ನು ಇಂಗ್ಲಿಷಿಗೆ ಅನುವಾದಿಸುತ್ತಾರೆ. ಹೀಗೆ ಪ್ರಕಟವಾದ ಈ ಗ್ರಂಥ ದೇಶ ವಿದೇಶಗಳಲ್ಲಿ ಚರ್ಚೆಗೆ, ವಿವಾದಕ್ಕೆ, ಕೌತುಕಕ್ಕೆ ಗ್ರಾಸವಾಗುತ್ತದೆ. ಆ ಪುಸ್ತಕದ ಬೆಲೆಯನ್ನು ವಿದೇಶೀಯರಿಗೆಂದೇ ಬರೋಬ್ಬರಿ 160 ಡಾಲರುಗಳು ಇಟ್ಟಿದ್ದರೂ ಸಹಾ ತುಂಬಾ ಪ್ರತಿಗಳು ಮಾರಾಟವಾಗುತ್ತವೆ. ಈ ಪುಸ್ತಕದ ಸಂಕ್ಷಿಪ್ತ ವಿವರ ಇಂತಿದೆ...

ವಿಮಾನ ಎಂದರೇನು? ಮಹರ್ಷಿ ಭಾರಧ್ವಜರ ಪ್ರಕಾರ;
'ವೇಗ ಸಾಮ್ಯಾತ್ ವಿಮಾನೋ ಅಂಡಾಜಾನಾಂ'

ಎಂದರೆ ಪಕ್ಷಿಗಳಂತೆ ಹಾರಾಡುವ ವಾಹನಗಳು ಎಂದು. ವೈಮಾನಿಕ ಶಾಸ್ತ್ರದಲ್ಲಿ ಪೈಲಟ್ಟುಗಳನ್ನು 'ರಹಸ್ಯ ಜ್ಞಾನೋಧಿಕಾರಿ' ಎಂದು ಸಂಭೋಧಿಸಲಾಗುತ್ತದೆ. 'ರಹಸ್ಯ ಲಹರಿ' ಎನ್ನುವ ಗ್ರಂಥವೇ ಪೈಲಟ್ಟುಗಳ Training Manual. ಇದರಲ್ಲಿ ವೈಮಾನಿಕರುಗಳು ಅರಿಯಬೇಕಾಗಿರುವ 32 ರಹಸ್ಯಗಳ ಬಗ್ಗೆ, ಅವರ ದಿನಚರಿ, ಆಹಾರ ವಿಧಾನಗಳ, ವಸ್ತ್ರ ವಿನ್ಯಾಸದ ಬಗ್ಗೆ ಸವಿಸ್ತಾರವಾಗಿ ವರ್ಣಿಸಲಾಗಿದೆ.

ಯುಗಗಳಿಗನುಸಾರವಾಗಿ ವಿಮಾನಗಳ ವರ್ಗಾವಣೆ ಮಾಡಲಾಗುತ್ತದೆ.

ಕೃತಾಯುಗದಲ್ಲಿ ವಿಮಾನಗಳ ಅವಶ್ಯಕತೆಯೇ ಇರಲಿಲ್ಲವಂತೆ. ಏಕೆಂದರೆ ಆ ಯುಗದಲ್ಲಿ ಧರ್ಮ ನಾಲ್ಕೂ ಪಾದಗಳ ಮೇಲೆ ಧೃಢವಾಗಿ ನೆಲಸಿತ್ತು. ಬಹುತೇಕ ಎಲ್ಲರೂ ದೈವೀ ಶಕ್ತಿಗಳುಳ್ಳವರಾಗಿದ್ದರು. ಹಲವಾರು ವಿಧದ ಶಕ್ತಿ ರೂಪಗಳನ್ನು ಪಡೆದವರಾಗಿದ್ದರು.

ಅನಿಮಾ…. ಅನಂತ ರೂಪ ,
ಮಹಿಮಾ...‌‌ ಬೃಹದಾಕಾರದ ರೂಪ,
ಗರಿಮಾ…... ಭಾರವಾಗುವುದು
ಲಘಿಮಾ…. ಹಗುರವಾಗುವುದು,
ಪ್ರಾಪ್ತಿಃ…... ಬಯಸಿದ್ದನ್ನು ಪಡೆಯುವುದು,
ಪ್ರಾಕಾಮ್ಯ…. ಕಾಮನೆಗಳಿಂದ        ಮುಕ್ತವಾಗುವುದು,
ಈಶತ್ವ….. ಸಾರ್ವಭೌಮತ್ವ ಪಡೆಯುವುದು  ವಶಿತ್ವ…... ವಶಪಡಿಸಿಕೊಳ್ಳುವುದು

ಹೀಗೆ ಅಷ್ಟಶಕ್ತಿಗಳನ್ನು ಪಡೆದು ದೈವೀಸಂಭೂತರಾಗಿ ಮುಕ್ತವಾಗಿ ಆಕಾಶದಲ್ಲಿ ಸಂಚರಿಸುವ ಶಕ್ತಿಯನ್ನು ಪಡೆದಿದ್ದರಂತೆ.
ಈ ಅಷ್ಟಶಕ್ತಿಗಳಲ್ಲಿ ಲಘಿಮಾ, ಗಾಳಿಗಿಂತ ಹಗುರವಾಗಿ  ತೇಲಾಡುವುದು, ಈ ಶಕ್ತಿಯನ್ನು ಬಳಸಿಕೊಂಡು ಗಗನಮಾರ್ಗದಲ್ಲಿ ಸ್ವಚಂದವಾಗಿ ಸಂಚರಿಸುತ್ತಿದ್ದರಂತೆ.

'ವಿಮಾನ ಚಂದ್ರಿಕ' ದ ಪ್ರಕಾರ, ತ್ರೇತಾಯುಗದಲ್ಲಿ ಮಂತ್ರಗಳ ಶಕ್ತಿ ಪ್ರಬಲವಾಗಿದ್ದುದರಿಂದ ಆ ಯುಗದ ವಿಮಾನಗಳನ್ನು "ಮಾಂತ್ರಿಕ ವಿಮಾನ"ಗಳೆಂದು ವಿಂಗಡಿಸಲಾಗಿದೆ. ದ್ವಾಪರಯುಗದಲ್ಲಿ ತಾಂತ್ರಿಕ ಶಕ್ತಿಗಳ ಪ್ರಬಲವಾಗಿದ್ದುದರಿಂದ ಆ ಯುಗದಲ್ಲಿನವು "ತಾಂತ್ರಿಕ ವಿಮಾನ"ಗಳು ಎಂದು ಕರೆದರು. ಕಲಿಯುಗದಲ್ಲಿ ಮಾಂತ್ರಿಕ ಮತ್ತು ತಾಂತ್ರಿಕ ಶಕ್ತಿ ಎರಡೂ ಇಲ್ಲದ್ದರಿಂದ ಈ ಯುಗದ ವಿಮಾನಗಳು "ಕೃತಕ ವಿಮಾನ"ಗಳಾದವು.

"ಪಂಚವಿಮ್ಶಾನ್ ಮಾಂತ್ರಿಕಾಃ ಪುಷ್ಪಕಾದಿ ಪ್ರಭೇದೇನಾ"
ಮಹರ್ಷಿ ಭಾರಧ್ವಜರ ಪ್ರಕಾರ ತ್ರೇತಾಯುಗದಲ್ಲಿ ಪುಷ್ಪಕವಿಮಾನವೂ ಸೇರಿದಂತೆ 25 ವಿಧದ ವಿಮಾನಗಳಿದ್ದವಂತೆ.
ಪುಷ್ಪಕ, ಅಜಮುಖ, ಬ್ರಜಾಸ್ವತ್, ಜ್ಯೋತಿರ್ಮುಖ, ವಜ್ರಾಂಗ, ಉಜ್ವಲ, ಕೋಲಾಹಲ, ಮಯೂರ, ತ್ರಿಪುರ, ವಸುಹಾರ, ಅಂಬರೀಶ, ಭೇರುಂಡ...ಹೀಗೆ ಹೆಸರುಗಳು.

ದ್ವಾಪರಯುಗಕ್ಕೆ ಬಂದರೆ, ಆಗಿನ ತಾಂತ್ರಿಕ ವಿಮಾನಗಳ ವಿಧಗಳು 56. ಮಹರ್ಷಿ ಗೌತಮರ ಪ್ರಕಾರ ಇವುಗಳ ಹೆಸರುಗಳು...ಭೈರವ, ನಂದಕ, ವಟುಕ ತುಂಬರ, ಗಜಾಸ್ಯ, ಸೌವರ್ಣಿಕ, ಬೃಹತ್ಕುಂಜ, ವಿಷ್ಣುರಥ....ಹೀಗೆ.

ಕಲಿಯುಗದ ಕೃತಕ ವಿಮಾನಗಳು 25 ವಿಧಗಳು. ಶಕುನ, ಸುಂದರ, ಮಂಡಲ, ವಕ್ರತುಂಡ, ಪದ್ಮಕ, ಪುಷ್ಕರ, ಕೋದಂಡ.....ಇತ್ಯಾದಿ.

ಮುಂದೆ ವಿವರಣೆ ನೀಡುತ್ತಾ... ವಿಮಾನ ನಿರ್ಮಾಣ ಹೇಗಿರಬೇಕೆಂದು ವಿವರಿಸುತ್ತಾರೆ. ರಾಜಲೋಹವನ್ನು ಉಪಯೋಗಿಸಿ ವಿಮಾನಗಳನ್ನು ನಿರ್ಮಿಸಬೇಕು ಎನ್ನುತ್ತಾರೆ. ಸೋಮ, ಸೌಂಡಾಲ ಮತ್ತು ಮಾರ್ದ್ವೀಕ ಲೋಹಗಳ ಮಿಶ್ರಣವನ್ನು ಕರಗಿಸಿ ತಯಾರಿಸಿದ ಮಿಶ್ರಲೋಹವನ್ನು ರಾಜಲೋಹ ಎಂದು ಕರೆದಿದ್ದಾರೆ. ಈ ರಾಜಲೋಹಕ್ಕೆ ಶಾಖ ನಿರೋದಕ ಶಕ್ತಿ ಇದ್ದಿತ್ತಂತೆ. ಈ ಲೋಹದಿಂದ ನಿರ್ಮಾಣಗೊಂಡ ವಲಯಗಳನ್ನು ದ್ರವಬಂಗಾರದ ತೆಳುವಾದ ಹಾಳೆಗಳಿಂದಮುಚ್ಚಲಾಗುತ್ತಿತ್ತಂತೆ. ಇದರಿಂದ ಸೌರಶಕ್ತಿಯನ್ನು ಸಂಗ್ರಹಿಸಿ ಉಪಯೋಗಿಸಲಾಗುತ್ತಂತೆ 50 ವಿಧದ ದ್ರವಬಂಗಾರಗಳ ವರ್ಣನೆಯನ್ನು ಅದನ್ನು ಶುಧ್ಧೀಕರಿಸುವ ವಿಧಾನ 'ಧಾತು ಸರ್ವಸ್ವ' ಎನ್ನುವ ಗ್ರಂಥದಲ್ಲಿದೆ.

ವಿಮಾನದ ಹೃದಯವೇ ಅದರ ಇಂಜಿನ್.
ಯಂತ್ರಕಲ್ಪತರು ಎನ್ನುವ ಗ್ರಂಥದಲ್ಲಿ ಸೌರಶಕ್ತಿ, ವಿದ್ಯುತ್ಶಕ್ತಿ, ವಾತಾಪಯಂತ್ರಗಳ ಉಲ್ಲೇಖವಿದೆ. ವಿದ್ಯುತ್ಚಕ್ತಿಯನ್ನು ತಯಾರಿಸಲೆಂದೇ 32 ಯಂತ್ರಗಳಿದ್ದವಂತೆ. 'ಲೋಹಸರ್ವಸ್ವ' ಗ್ರಂಥದಲ್ಲಿ ಹಲವಾರು ವಿಧದ ಖನಿಜಗಳನ್ನು ಉಪಯೋಗಿಸಿ ಇಂಧನಗಳನ್ನು ತಯಾರಿಸುವ ಬಗ್ಗೆ ವಿಸ್ತಾರವಾದವಿವರಣೆ ಇದೆ. ಕ್ರೌಂಚಲೋಹವನ್ನು ಸಿಡಿಲು ರಕ್ಷಣೆಗೆ ಉಪಯೋಗಿಸುತ್ತಿದ್ದರಂತೆ.

ಈ ಗ್ರಂಥದಲ್ಲಿ ಬರುವ ಕೆಲವು ಹಲವಾರು ಕೌತುಕಗಳಲ್ಲಿ ಪಾದರಸದ ಯಂತ್ರಗಳು ಒಂದು. ತುಂಬಾ ಇತ್ತೀಚೆಗೆ NASA ಇದರ ಬಗ್ಗೆ ಸಂಶೋಧನೆ ನಡೆಸಿ Mercury Vortex Engine ಗಳನ್ನು ಬಳಸಿದೆ. ಹನ್ನೊಂದನೇ ಶತಮಾನದಲ್ಲಿ ರಚಿಸಿದ " ಸಮರಾಂಗಣ ಸೂತ್ರಧಾರ" ಎನ್ನುವ ಗ್ರಂಥದಲ್ಲಿಯೂ ಈ ಪಾದರಸದ ಯಂತ್ರದ ಉಲ್ಲೇಖವಿದೆ. ಒಂದು ಭದ್ರವಾದ ಕೋಶದಲ್ಲಿ ಪಾದರಸವನ್ನು ಕಾಯಿಸಿ ಅದರಿಂದ ಉಂಟಾದ ಸ್ಪೋಟವನ್ನು gyroscope ಗಳನ್ನು ವೇಗವಾಗಿ ಪರಿಭ್ರಮಿಸುವಂತೆ ಮಾಡಿ ಭೂಮಿಯ ಗುರುತ್ವಾಕರ್ಷಣಗೆ ವಿರುದ್ದವಾಗಿ ಛಲ್ಲಾಂಗ ಹಾಕುವಂತೆ ಮಾಡಲಾಗುತ್ತಿತ್ತೇ?
ಒಂದಂತೂ ನಿಜ, ಇವಲ್ಲಾ ಯಾರೋ ಒಬ್ಬರ ಊಹೆ ಎನ್ನಲಾಗದು. ಬಹುತೇಕ ಎಲ್ಲಾ ಅಂಶಗಳಿಗೂ ಗ್ರಂಥಗಳ ಆಧಾರ ಕೊಡುತ್ತಾರೆ.

ನಮ್ಮ ದೇಶದ ಇತಿಹಾಸದ ಗರ್ಭದಲ್ಲಿ ಇಂತಹ ಇನ್ನೂ ಎಷ್ಟು ರಹಸ್ಯಗಳು ಅಡಗಿವೆಯೋ ಆ ಬಲ್ಲವನೇ ಬಲ್ಲನು!!

ಇದನ್ನೆಲ್ಲಾ ಬರೆಯುವಾಗ,  ಒಬ್ಬ ಪೈಲಟ್ಟಾಗಿ ಮೂರು ದಶಕಗಳ, ಹಲವಾರು ವಿಧಗಳ ವಿಮಾನಗಳ ವೈಮಾನಿಕನಾಗಿ ಅನುಭವವಿರುವ,  ವರ್ತಮಾನದಲ್ಲಿ ಅತ್ಯಾಧುನಿಕ Airbus-320 ವಿಮಾನದ ವೈಮಾನಿಕನಾಗಿ ಆಗಿ ಇದರಲ್ಲಿ ಬರೆದಿರುವುದನ್ನು ನಂಬುವುದಾ ಎನ್ನುವ ಪ್ರಶ್ನೆ ಎದಿರು ನಿಲ್ಲುತ್ತದೆ. ಯಾಕೆ ನಂಬಬಾರದು?

ನಮಗೆಲ್ಲಾ ಹೇಳಿರುವುದು Wright brothers 1903 ನೇ ಇಸವಿಯಲ್ಲಿ ಮೊದಲ ವಿಮಾನ ಹಾರಾಟ ನಡೆಸಿದರು ಎಂದು. ಆದರೆ ಇದಕ್ಕೂ ಮೊದಲು 1895ರಲ್ಲಿ ಶಿವಕರ್ ಬಾಪೂಜಿ ತಲಪಡೆ ಎನ್ನವವರು ವಿಮಾನ ಹಾರಾಟ ನಡೆಸಿದ್ದರಂತೆ, ಆದರೆ ಅದರ ಬಗ್ಗೆ ನಮಗೆ ಹೇಳಿಕೊಡಲಿಲ್ಲ. 1202 ರಲ್ಲಿ ಬಕ್ತಿಯಾರ್ ಖಿಲ್ಜಿ ಎನ್ನುವ ತುರ್ಕ ನಾಲಂದ ವಿಶ್ವವಿದ್ಯಾಲಯವನ್ನು ಧ್ವಂಸ ಮಾಡಿ, ಅಲ್ಲಿದ್ದ ಮೂರು ಮಹಡಿಯ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದನಂತೆ. ಅದರಲ್ಲಿದ್ದ ಸುಮಾರು 90 ಲಕ್ಷ ಗ್ರಂಥಗಳು ಮೂರು ತಿಂಗಳವರೆಗೂ ಉರಿಯುತ್ತಿದ್ದವಂತೆ. ನಮಗರಿಯದ ಅದೆಷ್ಟು ಜ್ಞಾನದ ಭಂಡಾರಗಳು ಉರಿದು ಬೂದಿಯಾದವೋ.. ಯಾರಿಗೆ ಗೊತ್ತು.

✍️….ವಿಂಗ್ ಕಮಾಂಡರ್ ಸುದರ್ಶನ

Tags

Admin

Admin Team of Vidya Chintan