ಕಾಲಕ್ಕೆ ತಕ್ಕಂತೆ ರಾಜನು ಇರುತ್ತಾನೋ ಅಥವಾ ರಾಜನಿಗೆ ತಕ್ಕಂತೆ ಕಾಲವು ಬದಲಾಗುತ್ತದೆಯೋ

Life Development Nov 06, 2021

ಗೋಭಿಃ ವಿಪ್ರೈಶ್ಚ ವೇದೈಶ್ಚ ಸತೀಭಿಃ ಸತ್ಯವಾದಿಭಿಃಅಲುಬ್ಧೈಃ ದಾನಶೀಲೈಶ್ಚ ಸಪ್ತಭಿಃ ಧಾರ್ಯತೆ ಮಹೀ  - ಸ್ಕಂದ ಪುರಾಣ, ಮಾಹೇಶ್ವರ ಕುಮಾರೀ ಖಂಡಗೋವು, ವಿದ್ವಾಂಸರು, ವೇದಗಳು, ಧರ್ಮವನ್ನು ಆಚರಿಸುವ ಮಾತೆಯರು, ಸತ್ಯವಾದಿಗಳು, ಲೋಭ ಇಲ್ಲದ ವ್ಯಕ್ತಿಗಳು ಹಾಗೂ ದಾನಶೀಲರು ಎಂಬ ಈ ಏಳು ಪ್ರಕಾರದ ಅಂಶಗಳಿಂದ ಈ ಜಗತ್ತು ನಡೆಯುತ್ತದೆ. ಸ್ಕಂದ ಪುರಾಣದ ಮಾಹೇಶ್ವರ ಕುಮಾರಿಕಾ ಖಂಡದಲ್ಲಿ ಹಾಗೂ ಕಾಶೀ ಖಂಡದ ಎರಡನೇ ಅಧ್ಯಾಯದಲ್ಲಿ ಎರಡು ಬಾರಿ ಉಲ್ಲೇಖಗೊಂಡಿರುವ ಈ ಶ್ಲೋಕದಲ್ಲಿ ಈ ಜಗತ್ತನ್ನು ಯಾವುದು ಧರಿಸಿದೆ ಅಥವಾ ಪೃಥ್ವಿಯ ಧಾರಕ ತತ್ವಗಳು ಯಾವವು? ಎಂದು ನೋಡುವಾಗ, ಅದರಲ್ಲಿ ಗೋವಂಶವು ಆ ಪಟ್ಟಿಯಲ್ಲಿ ಮೊತ್ತಮೊದಲ ಸ್ಥಾನದಲ್ಲಿ ಕಂಡು ಬರುತ್ತದೆ. ರಾಮಾಯಣದಲ್ಲಿ ಭರತನಿಗೆ ರಾಜಧರ್ಮವನ್ನು ಉಪದೇಶಿಸುವಾಗ ಶ್ರೀರಾಮನು “ವಾರ್ತಾಯಾಂ ಸಂಶ್ರಿತೋ ಲೋಕ:” ಅಂದರೆ ಈ ಜಗತ್ತು ವಾರ್ತಾ ಎಂಬುದುರಿಂದ ಪೋಷಿಸಲ್ಪಡುತ್ತದೆ ಎಂದು ಹೇಳುತ್ತಾನೆ.

ಈ “ವಾರ್ತಾ” ಎಂದರೆ ಏನು ಎಂದು ನೋಡಿದರೆ, ಚಾಣಕ್ಯನು ಅರ್ಥಶಾಸ್ತ್ರದಲ್ಲಿ ಹೇಳಿದ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆನ್ವೀಕ್ಷಿಕೀ, ತ್ರಯೀ ವಾರ್ತಾ ದಂಡನೀತಿಶ್ಚ ಶಾಶ್ವತೀಃವಿದ್ಯಾಶ್ಚತಸ್ರ ಏವೈತಾಃ ಲೋಕ ಸಂಸ್ಥಿತಿ ಹೇತವಃ ಆನ್ವೀಕ್ಷಿಕೀ ಎಂದರೆ, ತರ್ಕ ಶಾಸ್ತ್ರ. ಇದು ಮಾನವನ ಬುದ್ಧಿಯ ಬೆಳವಣಿಗೆ ಗೆ ಆವಶ್ಯಕ. ತ್ರಯೀ ಅಂದರೆ ಋಕ್ ಯಜುಃ ಸಾಮಗಳ ರೂಪದಲ್ಲಿರುವ ವೇದ ಹಾಗೂ ವೈದಿಕ ಧರ್ಮ. ವಾರ್ತಾ ಎಂದರೆ ವಾಣಿಜ್ಯ, ವ್ಯಾಪಾರ, ಆರೋಗ್ಯ, ಕೃಷಿ, ಕರಕುಶಲ ಕಲೆಗಳು, ಉದ್ದಿಮೆಗಳು ಇತ್ಯಾದಿ. ಇನ್ನು ನಾಲ್ಕನೇಯದ್ದು ದಂಡನೀತಿ ಅಂದರೆ ಅಪರಾಧಿಗಳನ್ನು ದಂಡಿಸುವ  ಕಾನೂನು. ಈ ನಾಲ್ಕು ಅಂಶಗಳಿಂದ ಲೋಕವು ನಡೆಯುತ್ತದೆ. ಈ ನಾಲ್ಕರ ಪೈಕಿ ವಾರ್ತಾ ಎನ್ನುವುದು ಅತೀ ಮಹತ್ವದ್ದು ಎಂದು ರಾಮನು ಭರತನಿಗೆ ಹೇಳಿದ್ದನ್ನು ಈಗಾಗಲೇ ನೋಡಿದ್ದೇವೆ. ಈ ವಾರ್ತಾ ಎಂಬ ವಿಭಾಗದಲ್ಲಿ  ಕೃಷಿ, ಗೌರಕ್ಷಣೆ ಮತ್ತು ವಾಣಿಜ್ಯಗಳು ಒಂದಕ್ಕೊಂದು ಸಂಬಂಧಪಟ್ಟಿವೆ ಹಾಗೂ ಅವು ಮೂರೂ ಈ ದೇಶದ ಅಭಿವೃದ್ಧಿಯ ಆಧಾರ ಸ್ತಂಭಗಳಾಗಿವೆ. ಭಗವದ್ಗೀತೆಯ 18ನೇ ಅಧ್ಯಾಯದಲ್ಲಿ ಕೃಷ್ಣನು ಇದನ್ನೇ “ಕೃಷಿ ಗೌರಕ್ಷ ವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಂ” ಎಂದು ಹೆಳಿದ್ದಾನೆ.

ಈ ಎಲ್ಲ ಉಲ್ಲೇಖಗಳಲ್ಲಿ ಗೋ ರಕ್ಷಣೆ ಎಂಬುದನ್ನು ಕೃಷಿ ಮತ್ತು ವಾಣಿಜ್ಯ ಎಂಬ ಎರಡು ಅಂಶಗಳ ಜೊತೆ ಸಮಾನವಾಗಿ ಹೇಳಿದ್ದಾರೆ ಎಂಬುದನ್ನು ಗಮನಿಸಬೇಕು. ಏಕೆಂದರೆ ಉಳಿದೆರಡು ಅಂಶಗಳಾದ ಕೃಷಿ ಮತ್ತು ವಾಣಿಜ್ಯಗಳು ಲೋಕದಲ್ಲಿ ಎಷ್ಟು ಮಹತ್ವಪೂರ್ಣವೋ, ಗೋರಕ್ಷಣೆಯೂ ಕೂಡ ಅಷ್ಟೇ ಅಗತ್ಯವಾದ್ದಾಗಿದೆ.  ಏಕೆಂದರೆ ಗೋವು ಇಲ್ಲದೇ ಕೃಷಿಯೂ ಸಾಧ್ಯವಿಲ್ಲ ಹಾಗೂ ವಾಣಿಜ್ಯವೂ ಸಾಧ್ಯವಿಲ್ಲ.  ತಂತ್ರಜ್ಞಾನದ ಕಾರಣದಿಂದ ನಾವು ಟ್ರಾಕ್ಟರ್ ಇತ್ಯಾದಿಗಳ ಬಳಕೆಯಿಂದ ಕೃಷಿ ಮಾಡುತ್ತೇವೆ, ಗೋವಿನ ಅಗತ್ಯವಿಲ್ಲ ಎಂಬ ಅಹಂಕಾರದಲ್ಲಿ ಜಗತ್ತು ಮುನ್ನುಗ್ಗಿತು. ಅದರ ದುಷ್ಪರಿಣಾಮಗಳನ್ನು ಈಗ ನಾವು ಎಲ್ಲೆಡೆ ನೋಡುತ್ತಿದ್ದೇವೆ.

ಕೇವಲ ಒಂದು ಎಕರೆ ಭೂಮಿ ಹಾಗು ಒಂದು ಜೋಡಿ ಹಸುಗಳು ಇದ್ದರೆ, ಅವುಗಳ ಮೂಲಕ ಎಕರೆಗೆ ಒಂದು ಲಕ್ಷ ರೂಪಾಯಿಯ ಆದಾಯ ಹೇಗೆ ಉಂಟು ಮಾಡಬಹುದು ಅಥವಾ ಒಂದು ಕುಟುಂಬದ ಸಮಗ್ರ ಆರ್ಥಿಕ ನಿರ್ವಹಣೆಯನ್ನು ಹೇಗೆ ಮಾಡಬಹುದು ಅನ್ನುವ ವಿಷಯದಲ್ಲಿ  ಕೊಲ್ಹಾಪುರದ ಹತ್ತಿರ ಇರುವ ಕಣೇರೀ ಮಠದಕಾಡಸಿದ್ದೆಶ್ವರ ಸ್ವಾಮಿಗಳು ತರಬೇತಿ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಹಾಗೂ ಸಾವಿರಾರು ಜನರು ಈ ತರಬೇತಿಯ ಪ್ರಯೋಜನವನ್ನು ಪಡೆದು ತಮ್ಮ ಜೀವನವನ್ನು ಬದಲಾಯಿಸಿಕೊಂಡಿದ್ದಾರೆ. ಹಾಗಾಗಿ ಗೋವು ಎನ್ನುವುದು ಪೂಜನೀಯವಾದ ಪ್ರಾಣಿ ಅಥವಾ ದೇವತೆಗಳ ನಿವಾಸ ಎಂಬ ಧಾರ್ಮಿಕ ಅಂಶವನ್ನು ನಾವು ಬದಿಗಿಟ್ಟು ಕೇವಲ ವ್ಯವಹಾರಿಕ ದೃಷ್ಟಿಯಿಂದ ನೋಡಿದರೂ ಕೂಡ, ಗೋವು ಇಲ್ಲದೇ ಈ ಜಗತ್ತು ನಾಶವಾಗುವುದು ಖಚಿತವಾಗಿದೆ.

ನಮ್ಮ ಉತ್ತರ ಕರ್ನಾಟಕದಲ್ಲಿ ದೀಪಾವಳಿಗೆ ಹಸು-ಕರು, ಹೋರಿ ಇತ್ಯಾದಿಗಳನ್ನು ಬಣ್ಣಗಳಿಂದ ಅಲಂಕರಿಸಿ ಸಂಭ್ರಮಿಸುತ್ತಾರೆ. ಧರ್ಮವು (ಅಥವಾ ಸಂಸ್ಕೃತಿಯು) ವ್ಯವಹಾರಿಕ ಸ್ವರೂಪ ಪಡೆದುಕೊಳ್ಳದೇ ಹೋದಾಗ ಅದನ್ನು ಯಾರಿಂದಲೂ ಉಳಿಸಲು ಸಾಧ್ಯವಿಲ್ಲ. ಹಾಗಾಗಿ ಸಂಸ್ಕೃತಿಯ ರಕ್ಷಣೆ ಎಂಬುದೇ ಒಂದು ವಿಚಿತ್ರವಾದ ಅಂಶವಾಗಿ ತೋರಿ ಬರುತ್ತದೆ. ಮಹಾಭಾರತದಲ್ಲಿ ಧರ್ಮರಾಜನು ಭೀಷ್ಮನ ಬಳಿ ರಾಜಧರ್ಮವನ್ನು ಕಲಿಯುವಾಗ, (ಅನುಶಾಸನೀಯ ಪರ್ವ)  ಕಾಲೋ ವಾ ಕಾರಣಂ ರಾಜಾ ರಾಜಾ ವಾ ಕಾಲಕಾರಣಂಇತಿ ತೆ ಸಂಶಯೋ ಮಾ ಭೂತ್ ರಾಜಾ ಕಾಲಸ್ಯ ಕಾರಣಂ-  ಎಂದು ಭೀಷ್ಮನು ಹೇಳುತ್ತಾನೆ. ಕಾಲಕ್ಕೆ ತಕ್ಕಂತೆ ರಾಜನು ಇರುತ್ತಾನೋ ಅಥವಾ ರಾಜನಿಗೆ ತಕ್ಕಂತೆ ಕಾಲವು ಬದಲಾಗುತ್ತದೆಯೋ ಎಂಬ ಸಂಶಯವೇ ಬೇಡ. ಏಕೆಂದರೆ ರಾಜನೇ ಕಾಲಕ್ಕೆ ಕಾರಕನಾಗಿರುತ್ತಾನೆ. ಹಾಗೆ ನಮ್ಮ ಪಾಲಿಸಿ ಮೇಕರ್ ಗಳು ದೂರದೃಷ್ಟಿ, ಸಮಗ್ರ ಹಿತ ಇತ್ಯಾದಿಗಳು ಇಲ್ಲದವರಾಗಿದ್ದರಿಂದ ಇಂದು ನಾವು ಗೋ ರಕ್ಷಣೆ, ಸಂಸ್ಕೃತಿ ರಕ್ಷಣೆ ಇತ್ಯಾದಿ ಮಾತನಾಡುವ ಕಾಲ ಬಂದೊದಗಿದೆ.

Tags

Admin

Admin Team of Vidya Chintan