ಜೀವನವು ಆಸ್ತಿಯಲ್ಲ, ವಸ್ತುವಲ್ಲ.

Life Development Aug 08, 2021

ಜಗತ್ತು ಮಾರುಕಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವುದರಿಂದ ಜೀವನವನ್ನೂ ಕೂಡ ಮಾರುಕಟ್ಟೆಯ ವಸ್ತುವಾಗಿ ಅಥವಾ ಒಂದು ಆಸ್ತಿಯಾಗಿ ನೋಡಲಾಗುತ್ತಿದೆ. ಹಾಗಾಗಿ ಈ ವಯಸ್ಸಿನಲ್ಲಿ ಇಷ್ಟು ಸಂಪಾದನೆ ಮಾಡಬೇಕು, ಅಥವಾ ಇಷ್ಟು ಡಿಗ್ರೀಗಳನ್ನು ಪಡೆದಿರಬೇಕು, ಉದ್ಯೋಗದಲ್ಲಿ ಈ ಸ್ಥಾನಕ್ಕೆ ತಲುಪಿರಬೇಕು ಇತ್ಯಾದಿ ಮಾಪದಂಡಗಳು ನಿರ್ಮಾಣವಾಗಿವೆ. ಒಂದು ಭೂಮಿಯನ್ನು ಖರೀದಿಸಿದರೆ, ಅದರ ಬೆಲೆ ಇಷ್ಟು ವರ್ಷಗಳಲ್ಲಿ ಇಷ್ಟು ಪಟ್ಟು ಹೆಚ್ಚಾಗಿರಬೇಕು ಅನ್ನುವ ಲೆಕ್ಕಾಚಾರ ಇದೆಯಲ್ಲ, ಅದು ಜೀವನಕ್ಕೂ ಅನ್ವಯವಾಗುತ್ತಿರುವ ಕಾಲ ಇದು. ಹಾಗಾಗಿ ನಿನ್ನ ಕ್ಲಾಸ್‌ ಮೇಟ್‌ ಗಳು ಅದನ್ನು ಮಾಡ್ತಿದಾರೆ. ನೀನು ಇನ್ನೂ ಇಲ್ಲೇ ಇದ್ದೀಯಲ್ಲ ಎಂಬ ಪ್ರಶ್ನೆಗಳು ಪೋಷಕರಿಂದ, ಸಮಾಜದಿಂದ ಎಸೆಯಲ್ಪಡುತ್ತವೆ. ಆ ಪ್ರಶ್ನೆಗಳ ಒತ್ತಡಕ್ಕೊಳಗಾದ ಮನಸ್ಸುಗಳು ಪೈಪೋಟಿಗಿಳಿಯುತ್ತವೆ. ಆದರೆ, ಮನುಷ್ಯನ ಹುಟ್ಟು ಹೇಗೆ ಆಯಿತು ಅಥವಾ ಯಾವುದರಿಂದ ಆಯಿತು ಅಂತ ನೋಡುವಾಗ, ಯಾತಕ್ಕಾಗಿ ಹುಟ್ಟು ಅನ್ನುವ ಪ್ರಶ್ನೆಗೂ  ಉತ್ತರ ದೊರೆಯುತ್ತದೆ. ಆ ಉತ್ತರವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಈ ಮಾರುಕಟ್ಟೆಯ ಲೆಕ್ಕಾಚಾರಗಳನ್ನು ಬದಿಗಿಟ್ಟರೆ ಒಂದು ಹೊಸ ದೃಷ್ಟಿ ಜೀವನದ ಬಗೆಗೆ ದೊರೆಯುತ್ತದೆ.

ಪಂಚ ಮಹಾಯಜ್ಞಗಳು

ದೇವಯಜ್ಞ, ಭೂತಯಜ್ಞ ಇತ್ಯಾದಿ ಪಂಚ ಮಹಾಯಜ್ಞಗಳ ಮೂಲಕ ನಾವು ಮಾಡುವುದು ಏನೆಂದರೆ, ಯಾವುದನ್ನೇ ಆಗಲಿ, ನಾವು ಭೋಗಿಸುವ ಮುನ್ನ ಅದನ್ನು ಇತರರಿಗೆ ಹಂಚುವುದು. ಹಂಚದೇ ತಿನ್ನಬಾರದು ಅನ್ನುವ ನಿಯಮ ಅನಕ್ಷರಸ್ಥ ಭಾರತೀಯರಲ್ಲಿಯೂ ಇದೆ. ಕಣದಲ್ಲಿ ಧಾನ್ಯದ ರಾಶಿ ಸಿದ್ಧವಾದೊಡನೆ, ಊರಲ್ಲಿನ ಕೆಲವೊಂದು ಮನೆ, ಮಠಗಳವರನ್ನು ಕರೆದು ಪಾಲು ಕೊಡುವುದು ವಾಡಿಕೆ. ಜೊತೆಗೆ ದನಕರುಗಳಿಗೆ ಬೇಕಾಗುವ ತೌಡು, ಹುಲ್ಲುಗಳಲ್ಲದೇ ಕಾಳುಗಳನ್ನೂ ಪೇರಿಸಲಾಗುತ್ತೆ. ಹೀಗೆ ಅನಕ್ಷರಸ್ಥರು ಅಂದುಕೊಂಡ ರೈತರೂ ಕೂಡ ಪಂಚಮಹಾ ಯಜ್ಞಗಳನ್ನು ಮಂತ್ರವಿಲ್ಲದೇ ಮಾಡುತ್ತ ಬಂದ ದೇಶವಿದು. ಮಾಂಸ ತಿನ್ನಬೇಕು ಅನ್ನುವ ಆಸೆ ಆದರೆ, ಅದನ್ನು ಮೊದಲು ದೇವರಿಗೆ ಅರ್ಪಿಸಿ,ಇತರರಿಗೆ ಒಂದು ಪಾಲು ಕೊಟ್ಟು, ಉಳಿದದ್ದನ್ನು ಪ್ರಸಾದವೆಂದು ತಿನ್ನುತ್ತಾರೆ. ಅಷ್ಟೇಕೆ, ಕೊನೆಗೆ ಕುಡುಕರೂ ಕೂಡ ಸಾರಾಯಿ ಕುಡಿಯುವಾಗ, ಅದರಲ್ಲಿ ಎರಡು ಬೆರಳು ಹಾಕಿ ತೆಗೆದು ಆ ಬೆರಳುಗಳನ್ನು ಕೊಡವುವುದರ ಮೂಲಕ ನಾಲ್ಕಾರು ಹನಿಗಳನ್ನು ದೇವರಿಗೆ ಸಿಂಪಡಿಸಿ ಕುಡಿಯುವ ಸಂಪ್ರದಾಯ ಈಗಲೂ ಬಾರುಗಳಲ್ಲಿ ಕಂಡುಬರುತ್ತದೆ.

"ತೇನ ತ್ಯಕ್ತೇನ ಭುಂಜೀಥಾ:" ಅನ್ನುವ ಈಶಾವಾಸ್ಯ ಉಪನಿಷತ್ತಿನ ವಾಕ್ಯವು ಈ ರೀತಿಯಾಗಿ ಎಲ್ಲೆಡೆ ಆಚರಣೆಯಲ್ಲಿ ಕಂಡುಬರುತ್ತದೆ.  ಯಾರು ತ್ಯಾಗ ಮಾಡುವುದಿಲ್ಲವೋ, ಅವರಿಗೆ ಭೋಗ ಮಾಡುವ ಅಧಿಕಾರ ಬರುವುದಿಲ್ಲ. ಹಾಗೆ, ತ್ಯಾಗವಿಲ್ಲದೇ ಭೋಗ ಮಾಡುತ್ತ ಹೋದಂತೆ, ಪ್ರಕೃತಿಯ ಋಣ ಹೆಚ್ಚಾಗುತ್ತ ಹೋಗಿ, ಮುಖ ಗಂಟಿಕ್ಕಿದಂತೆ ಆಗುವುದು, ಸಂಪತ್ತಿದ್ದರೂ ಸುಖವಿಲ್ಲದಂತಾಗುವುದು ಇತ್ಯಾದಿಗಳು ನಡೆಯುತ್ತವೆ. ಈ ಕರ್ಮಕಾಂಡವನ್ನು ನೋಡಿದರೂ ಕೂಡ, ಅಲ್ಲಿ ಎಲ್ಲ ಪ್ರಕಾರದ, ಶಾಂತಿ ಹಾಗೂ ಪ್ರಾಯಶ್ಚಿತ್ತಗಳಲ್ಲಿ ದಾನವೇ ಅಥವಾ ಕೃಚ್ಛ್ರವೇ ಅತ್ಯಂತ ಮಹತ್ವದ ಭಾಗವಾಗಿರುತ್ತದೆ. ತ್ಯಾಗವಿಲ್ಲದೇ ಮಾಡಿದ ಸಂಗ್ರಹದಿಂದ ಒಂದು ಭಾಗವನ್ನು ದಾನ ಮಾಡಿದಾಗ, ಉಳಿದ ದ್ರವ್ಯವು ಭೋಗಕ್ಕೆ ಯೋಗ್ಯವಾಗುತ್ತದೆ. ನಾವು ಯಜ್ಞರೂಪದಲ್ಲಿ ತ್ಯಾಗ ಮಾಡಿದರೆ ಪುಣ್ಯವು ಉಂಟಾಗುತ್ತದೆ. ಹಾಗೆ ಮಾಡದೇ ಸಂಗ್ರಹಿಸಿದಲ್ಲಿ, ಅದನ್ನು ಪ್ರಾಯಶ್ಚಿತ್ತರೂಪದಲ್ಲಿ ಬಲವಂತವಾಗಿ ಹಂಚಿಸುವ ಕ್ರಮ ನಮ್ಮ ಹಿರಿಯರು ಮಾಡಿದ್ದಾರೆ. ಒಟ್ಟಿನಲ್ಲಿ ಹಂಚಿ ತಿಂದರೆ ಮಾತ್ರ ಸುಖ ಎನ್ನುವ ನಿಯಮವನ್ನು ಪ್ರಕೃತಿ ಮಾಡಿಟ್ಟಿದೆ. ಆ ನಿಯಮವನ್ನು ತಿಳಿದವರು ಸುಖಿಗಳಾಗ್ತಾರೆ. ಉಳಿದವರು ದುಃಖವನ್ನುಂಡು ಬಲವಂತವಾಗಿ ಕಕ್ಕುತ್ತಾರೆ. ಒಟ್ಟಿನಲ್ಲಿ ಪ್ರಕೃತಿ ಕಿತ್ತುಕೊಂಡೇ ತೀರುತ್ತದೆ.

ಈ ಹಂಚುವಿಕೆ ಅನ್ನುವುದು ಕೇವಲ ದ್ರವ್ಯಕ್ಕೆ ಮಾತ್ರ ಸೀಮಿತವಾಗದೇ, ಪ್ರಾಣಕ್ಕೂ ಸಂಬಂಧಿಸಿದ್ದಾಗಿದೆ.  ಪಂಚಪ್ರಾಣಗಳಿಂದ ಕೂಡಿದ ಈ ಶರೀರದ ಉಪಯೋಗವು ಕೇವಲ ಭೋಗಕ್ಕಾಗಿ ಆಗುತ್ತಿದ್ದರೆ, ಅದರ ಅನುಭೂತಿ, ಸಾಮರ್ಥ್ಯ ಇತ್ಯಾದಿಗಳು ಕಡಿಮೆಯಾಗುತ್ತ ಹೋಗುತ್ತವೆ. ಆದರೆ ಆ ಪ್ರಾಣಶಕ್ತಿಯ ಬಳಕೆಯನ್ನು ಹಂಚುವುದಕ್ಕಾಗಿ ಮಾಡಿದರೆ, ಆ ಶರೀರ ಮತ್ತು ಅದರ ಮೂಲಕ ಅನುಭೂತಿಯನ್ನು ಹೊಂದುವ ಮನಸ್ಸು ಹೆಚ್ಚು ಹೆಚ್ಚು ಸುಖಿ ಮತ್ತು ಸಾಮರ್ಥ್ಯವಂತವಾಗುತ್ತ ಹೋಗುತ್ತದೆ. ಆದರೆ ಈ ಪ್ರಾಣದ ಹಂಚುವಿಕೆ, ಅರ್ಥಾತ್‌ ಈ ದೇಹದ ಅಥವಾ ಸಮಯದ ಬಳಕೆಯನ್ನು ಇತರರಿಗಾಗಿ ಮಾಡುತ್ತ ಹೋಂದಂತೆ ಅದರ ಸುಖದ ಗುಣವತ್ತತೆ ಮತ್ತು ಪ್ರಮಾಣ ಹೆಚ್ಚಾಗುತ್ತ ಹೋದರೂ, ಈ ಮಾರುಕಟ್ಟೆಯ ದೃಷ್ಟಿಯಲ್ಲಿ ಅದಕ್ಕೆ ಯಾವುದೇ ಕಿಮ್ಮತ್ತಿಲ್ಲ.ಹಾಗಾಗಿ, ನಿನ್ನ ಪ್ರಾಣದ ಅಥವಾ ನಿನ್ನ ಶರೀದ ಬಳಕೆ ಯಾವ ಉದ್ದೇಶಕ್ಕೆ ಆಯಿತು? ಅದರಿಂದ ಎಷ್ಟು ಪುಣ್ಯಾರ್ಜನೆ ಆಯಿತು? ಆ ಪುಣ್ಯದ ಪ್ರಭಾವದಿಂದ ಎಷ್ಟು ಆಳವಾದ ಸುಖದ ಅನುಭೂತಿ ಆಗುತ್ತಿದೆ? ಇತ್ಯಾದಿ ಪ್ರಶ್ನೆಗಳನ್ನು ಸಮಾಜವು ಕೇಳುವುದಿಲ್ಲ. ಬದಲಿಗೆ, ಈ ವಯಸ್ಸಿನಲ್ಲಿ ಎಷ್ಟು ಆರ್ಥಿಕ ಸುರಕ್ಷತೆ ಮಾಡಿಕೊಳ್ಲಬೇಕಿತ್ತು ಗೊತ್ತಾ? ಸೇವಿಂಗ್ಸ್‌ ಎಷ್ಟಿದೆ? ಎಷ್ಟು ಬಾರಿ ಪ್ರಮೋಷನ್‌ ಆಯ್ತು? ಮಕ್ಕಳು ಯಾವ ಸ್ಕೂಲ್‌ ನಲ್ಲಿ ಓದ್ತಿದಾರೆ ? ಇತ್ಯಾದಿಗಳ ಆಧಾರದ ಮೇಲೆ ಸುಖದ ಅಥವಾ ಯಶಸ್ಸಿನ ಅಳೆಯುವಿಕೆ ನಡೆಯುತ್ತಿದೆ. ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಹೋಗುವವರು ಸುಖದ ಅಪೇಕ್ಷೆಯನ್ನು ಇಟ್ಟುಕೊಳ್ಳಬಾರದು.

ಲೇಖಕ : ದತ್ತರಾಜ ದೇಶಪಾಂಡೆ

Tags

Admin

Admin Team of Vidya Chintan